ಕುಲನಿಷ್ಠ ವರ್ಗಗಳು

ಕುಲನಿಷ್ಠ ಜನಸಮುದಾಯಗಳ ಗುಣಲಕ್ಷಣಗಳನ್ನೇ ಪಡೆದಿದ್ದರೂ ಗಾತ್ರದಲ್ಲಿ ಬಹು ಚಿಕ್ಕವಾಗಿರುವುದರಿಂದ ಇಂಥ ಗುಂಪುಗಳನ್ನು ಕುಲನಿಷ್ಠ ವರ್ಗಗಳು (ಎತ್ನಿಕ್ ಗ್ರೂಪ್ಸ್) ಎನ್ನಲಾಗಿದೆ. ಇವು ತಮ್ಮದೇ ಆದ ನಾಗರಿಕತೆ, ಸಂಸ್ಕøತಿ, ಜೀವನಕ್ರಮಗಳನ್ನು ಹೊಂದಿದವಾಗಿರುತ್ತವೆ. ಇಂಥ ವರ್ಗಗಳನ್ನು ಜಗತ್ತಿನಾದ್ಯಂತ ಕಾಣಬಹುದು. ಇವು ಇಂದು ನಿನ್ನೆ ಹುಟ್ಟಿದವಲ್ಲ; ಬಹಳ ಹಿಂದಿನಿಂದಲೂ ನಡೆದುಬಂದಂಥವು. ವರ್ಣ ಮತ್ತು ಸಂಸ್ಕøತಿಗಳ ಆಧಾರದ ಮೇಲೆ ಮಾನವಕುಲಶಾಸ್ತ್ರವನ್ನು ಅಭ್ಯಾಸ ಮಾಡಿದವರು ವಿವಿಧ ಕುಲನಿಷ್ಠ ವರ್ಗಗಳನ್ನು ಗುರುತಿಸಿದ್ದಾರೆ. ಇತಿಹಾಸಕಾರರು ವಿವಿಧ ದೇಶಗಳ ಜೀವನವನ್ನು ವರ್ಣಿಸುವಾಗ ಇಂಥ ವರ್ಗಗಳನ್ನು ನಮೂದಿಸಿದರು. ಸಮಾಜ ಶಾಸ್ತ್ರಜ್ಞರು ಕೂಡ ಸಾಮಾಜಿಕ ಅಂಶಗಳನ್ನು ಅಭ್ಯಾಸ ಮಾಡುವಾಗ ಜನಾಂಗಗಳನ್ನು ಅರ್ಥಮಾಡಿಕೊಳ್ಳುವಾಗ ಈ ವರ್ಗಗಳ ಬಗ್ಗೆ ಸಂಶೋಧನೆ ನಡೆಸಿದರು. ಭಾರತದಂಥ ಬೃಹದ್ ದೇಶದಲ್ಲಿ ಅಸಂಖ್ಯ ಕುಲನಿಷ್ಠ ಸಮಾಜಗಳು ಕಂಡು ಬರುತ್ತವೆ.

ಕುಲನಿಷ್ಠ ವರ್ಗಗಳ ವಿಭಜನೆ ಸಾಮಾಜಿಕವಾದುದು. ಆದ್ದರಿಂದ ಜನಸಂಖ್ಯಾ (ಪಾಪ್ಯು ಲೇಷನ್) ವಿಭಾಗ ಕ್ರಮಕ್ಕೂ ಇದಕ್ಕೂ ವ್ಯತ್ಯಾಸವಿದೆ. ಉದಾಹರಣೆಗೆ ಪೂರ್ವ ಆಫ್ರಿಕೆಯಲ್ಲಿರುವ ಯುರೋಪಿಯನ್ನರು, ಅರಬರು ಮತ್ತು ಭಾರತೀಯರು ಜನಸ್ಯಂಖ್ಯೆಯ ಒಂದು ವಿಭಾಗವೆಂದು ಹೇಳಬಹುದೇ ಹೊರತು ಅವರನ್ನು ಸಾಮಾಜಿಕ ವರ್ಗಗಳೆಂದು ಹೇಳಲಿಕ್ಕೆ ಆಗದು. ಅದೇ ಅಲ್ಲಿಯ ಭಾರತೀಯರು ತಾವು ಒಂದೇ ಬುಡಕಟ್ಟಿನವರೆಂಬ ಕಲ್ಪನೆಯನ್ನು ತಾಳಿದಲ್ಲಿ ಅವರದೊಂದು ಕುಲನಿಷ್ಠ ವರ್ಗವೆಂದು ಪರಿಗಣಿಸಬಹುದು. ಕೆಲವೊಂದು ಸಲ ಕುಲನಿಷ್ಠ ವರ್ಗಗಳು ಕೇವಲ ಜನಸಂಖ್ಯೆಯ ವಿಭಾಗಗಳೂ ಆಗಿರಬಹುದು. ಉದಾಹರಣೆಗೆ ಇಂಗ್ಲೆಂಡಿನಲ್ಲಿನ ಸ್ಕಾಟರು ಮತ್ತು ವೆಲ್ಷರು ಇಂಗ್ಲೆಂಡಿನ ಕೇವಲ ಜನಸಂಖ್ಯೆಯ ವಿಭಾಗವಾಗಿದ್ದರೂ ಕುಲನಿಷ್ಠ ವರ್ಗಗಳಂತೆ ಪರಿಗಣಿತವಾಗಿದ್ದಾರೆ. 

ಸಾಮಾಜಿಕ ಸ್ತರೀಕರಣದಲ್ಲಿ ಕುಲನಿಷ್ಠ ವರ್ಗಗಳನ್ನು ಚಿಕ್ಕ ಸಾಂಸ್ಕøತಿಕ ಸಮೂಹಗಳನ್ನು ಗಮನಿಸುತ್ತಾರೆ. ಸಾಂಪ್ರದಾಯಿಕವಾಗಿ ಸಮಾಜಶಾಸ್ತ್ರಜ್ಞರು ಜಾತಿ, ಸಂಪತ್ತು ಅಥವಾ ವರ್ಗಗಳ ಆಧಾರದ ಮೇಲೆ ಸಮಾಜವನ್ನು ಸ್ತರೀಕರಿಸುತ್ತಾರೆ.

ಭಾರತೀಯ ಸಮಾಜದಲ್ಲಿ ಕಂಡುಬರುವ ಜಾತಿ ಮತ್ತು ಉಪಜಾತಿ ಸಂಸ್ಥೆಗಳು ಕುಲನಿಷ್ಠ ವರ್ಗಗಳಂತಿವೆ. ವರ್ಣಾಶ್ರಮಧರ್ಮ ಪದ್ಧತಿಯಲ್ಲಿ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಗಗಳಲ್ಲಿ ವಿಭಾಗಿಸಲಾಗಿದೆ. ಇಂಥ ವರ್ಣ, ಜಾತಿ ಮತ್ತು ಉಪಜಾತಿಯ ಸಂಸ್ಥೆಗಳು ಹೆಚ್ಚಾಗಿ ಜನಸಂಖ್ಯೆಯ ವಿಭಾಗಗಳಂತೆ ಬೆಳೆದು ಬಂದಿದ್ದು ಸಮಾಜದಲ್ಲಿನ ಸ್ತರೀಕೃತ ಸಮೂಹಗಳಂತಲ್ಲ, ಭಾರತದಲ್ಲಿಯ ಜಾತಿ ಸಂಸ್ಥೆಗಳು ಇತರ ದೇಶಗಳಲ್ಲಿಯ ಜಾತಿ ಸಂಸ್ಥೆಗಳಿಗಿಂತ ಭಿನ್ನವಾಗಿದ್ದು ಕೆಲವು ಸಲ ಅತ್ಯಂತ ಚಿಕ್ಕ ಜನಸಮೂಹಗಳಾಗಿರುತ್ತವೆ. 

	ವೆಸ್ಟ್ ಇಂಡೀಸಿನಂಥ ಕೆಲವು ದೇಶಗಳಲ್ಲಿ ಸಾಮಾಜಿಕ ವರ್ಗಗಳೇ ಕುಲನಿಷ್ಠ ವರ್ಗಗಳಂತಿವೆ. ಸಮಾಜದಲ್ಲಿ ಒಂದೇ ತರದ ಸ್ಥಾನಮಾನವಿರುವ ಜನಸಮೂಹಗಳನ್ನು ಒಂದು ಸಾಮಾಜಿಕ ವರ್ಗವೆಂದು ಸಮಾಜಶಾಸ್ತ್ರಜ್ಞರು ಭಾವಿಸುತ್ತಾರೆ. ಇಂಥ ಸಾಮಾಜಿಕ ವರ್ಗಗಳಲ್ಲಿ ಉಳಿದ ವರ್ಗಗಳೊಡನೆ ಸ್ಪಷ್ಟವಾದ ಭಿನ್ನತೆ ಕಂಡು ಬರುತ್ತದೆಯಲ್ಲದೇ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಸ್ಥಾನಮಾನ ಪರ್ಯಟನ ಕಂಡುಬರುತ್ತದೆ. ಕೇವಲ ಒಂದು ಜನಸಮೂಹಕ್ಕೆ ಸಾಮಾಜಿಕ ವರ್ಗವೆಂದು ಹೆಸರು ಸಲ್ಲದು. ಕುಲನಿಷ್ಠ ವರ್ಗಕ್ಕೆ ಇಲ್ಲವೆ ಜನಸಂಖ್ಯೆಯ ಒಂದು ಭಾಗಕ್ಕೆ ಸೇರಿದವರು ಮಾತ್ರ ಒಂದು ಸಾಮಾಜಿಕ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಒಂದು ಸಾಮಾಜಿಕ ವರ್ಗಕ್ಕೆ ಸೇರಿದ ಎಲ್ಲರೂ ಒಂದೇ ಕುಲನಿಷ್ಠ ವರ್ಗಕ್ಕೆ ಸೇರಿದವರೆಂದು ಹೇಳಲಿಕ್ಕೆ ಆಗದು. ಒಂದು ವೇಳೆ ಒಂದು ಕುಲನಿಷ್ಠವರ್ಗ ಒಂದೇ ತೆರನಾದ ಸಾಮಾಜಿಕ ವರ್ಗಕ್ಕೆ ಸೇರಿದ್ದಾಗಿದ್ದರೆ ಆಗ ಕುಲನಿಷ್ಠವರ್ಗ ಮತ್ತು ಸಾಮಾಜಿಕ ವರ್ಗ ಒಂದೇ ಗುಂಪಿನವಾಗುತ್ತವೆ. 

	ಯಾವುದೇ ಒಂದು ಸಮಾಜದಲ್ಲಿ ವರ್ಣ ಒಂದೇ ಆಗಿದ್ದು ಅನೇಕ ಸಂಸ್ಕøತಿಗಳಿದ್ದರೆ ಅಂಥ ಗುಂಪುಗಳು ಸ್ಪಷ್ಟವಾಗಿ ಕುಲನಿಷ್ಠವರ್ಗಗಳಂತೆ ಕಂಡುಬರುತ್ತವೆ. ಆದರೆ ಅನೇಕ ಒಂದೇ ಸಂಸ್ಕøತಿಯನ್ನು ಹೊಂದಿದ್ದರೆ ವರ್ಣಭೇದ ಸ್ಪಷ್ಟವಾಗಿ ವರ್ಣದ ಆಧಾರದ ಮೇಲೆ ಜನಾಂಗಗಳು ಪ್ರತ್ಯೇಕ ಕುಲನಿಷ್ಠ ವರ್ಗಗಳಾಗಿ ಮೂಡಿಬರುತ್ತವೆ.

	ಬರ್ಮ ಮತ್ತು ಇಂಡೋನೇಷ್ಯದಂಥ ರಾಷ್ಟ್ರಗಳು ಸ್ವಾತಂತ್ರ್ಯಪೂರ್ವದಲ್ಲಿ ಒಂದೇ ಆಳ್ವಿಕೆಗೆ ಒಳಪಟ್ಟಾಗ್ಯೂ ಅಲ್ಲಿ ಅನೇಕ ವರ್ಣಗಳ ಜನಾಂಗಗಲೂ ಅನೇಕ ಸಂಸ್ಕøತಿಗಳ ಕುಲನಿಷ್ಠ ಸಮೂದಾಯಗಳೂ ಕೂಡಿ ಬಾಳುತ್ತಿದ್ದವು. ಇಂಥ ಪರಿಸ್ಥಿತಿಯಲ್ಲಿ ಅನೇಕ ತರದ ಕುಲನಿಷ್ಠ ವರ್ಗಗಳೂ ಒಂದೇ ರಾಜಕೀಯ ಆಡಳಿತದಲ್ಲಿ ಬಾಳುವುದನ್ನು ಕಾಣಬಹುದು.

	ಕುಲನಿಷ್ಠ ವರ್ಗಗಳನ್ನು ಹೊಂದಿದ ಎಲ್ಲ ಸಮಾಜಗಳೂ ಸಾಮಾಜಿಕ ಸ್ತರೀಕರಣದಲ್ಲಿ ಸೇರ್ಪಡೆಗೊಳ್ಳವು. ಅಲ್ಲದೆ ಕುಲನಿಷ್ಠ ವರ್ಗಗಳಲ್ಲಿಯೇ ಕಂಡು ಬರುವ ಸಂಬಂಧ ಬಹುಮಟ್ಟಿಗೆ ಸಂಯುಕ್ತ ಸಂಘದ ಮಾದರಿಯದಾಗಿರುವುದೇ ಹೊರತು ಅಂತಸ್ತುಗಳನ್ನು ಹೊಂದಿರುವಂಥದಾಗಿರದು.

ಸ್ವಿಟ್‍ಜûರ್ಲೆಂಡ್, ಕೆನಡ ದೇಶಗಳಲ್ಲಿ ಸಾಂಸ್ಕøತಿಕ ಸಮೂಹಿಕ ಸಮೂಹಗಳು ಸ್ಪಷ್ಟವಾಗಿ ಪ್ರತ್ಯೇಕಿಸಲ್ಪಟ್ಟಿವೆ. ಇಲ್ಲಿನ ಪ್ರತಿಯೊಂದು ಕುಲನಿಷ್ಠ ವರ್ಗಗಳನ್ನೂ ಸ್ತರೀಕರಿಸಬಹುದು. ಆದರೆ ಮಾನವಕುಲ ಶಾಸ್ತ್ರದೃಷ್ಟಿಯಿಂದ ಇಂಥ ಸಮೂಹಗಳ ಶಕ್ತಿ ವಿಶಾಲವಾದ ಸಮಾಜದಲ್ಲಿ ಸಾಕಷ್ಟು ಇರುವುದಿಲ್ಲ. ಅಥವಾ ಮೇಲು ಕೀಳು ಎಂದು ಮೌಲ್ಯಮಾಪನಕ್ಕೊದಗುವುದಿಲ್ಲ. ಮಲಯ ದೇಶದಲ್ಲಿ ಕುಲನಿಷ್ಠ ವರ್ಗಗಳಿದ್ದರೂ ಅವು ಒಂದಕ್ಕೊಂದು ಸಂಬಂಧ ಸೂಚಿಸುವಂತೆ ಸ್ತರೀಕರಿಸಲ್ಪಟ್ಟಿಲ್ಲ. ಇಲ್ಲಿಯ ಜನಸಂಖ್ಯೆ ಮಲಯ ದೇಶದವರಿಂದಲೂ ಚೀನದ ವಲಸೆಗಾರರಿಂದಲೂ ಭಾರತೀಯರಿಂದಲೂ ಕೂಡಿದೆ. ಇಲ್ಲಿ ಸರ್ಕಾರ ಚುನಾಯಿಸಲ್ಪಟ್ಟ ಜನರಿಂದ ನಡೆಯುತ್ತದೆ. ಸರ್ಕಾರದ ಹೊಣೆ ಮಲಯದ ಜನರ ಮೇಲಿದ್ದರೂ ದೇಶದ ಆರ್ಥಿಕ ಪರಿಸ್ಥಿತಿ ಚೀನೀಯರಿಂದ ನಿಯಂತ್ರಣಗೊಂಡಿದೆ. ಈ ಪ್ರಕಾರ ಮಾನವಕುಲ ವಿಭಾಗಗಳು ದೇಶದ ಅನೇಕ ಅಂಶಗಳ ಮೇಲೆ ಪ್ರತ್ಯೇಕವಾಗಿ ಪ್ರಭಾವ ಬೀರಬಹುದಾಗಿದೆ.

ಮೆಕ್ಸಿಕೊ ದೇಶದಲ್ಲಿ ಸಾಮಾಜಿಕ ಸಮೂಹಗಳನ್ನು ಪ್ರತ್ಯೇಕಿಸುವಾಗ ಕುಲನಿಷ್ಠ ವರ್ಗಗಳಗೆ ಪ್ರಾಧಾನ್ಯ ಕೊಡುವುದಿಲ್ಲ. ಇಲ್ಲಿ ಜನ ರಾಜಕೀಯ, ಆರ್ಥಿಕ ಮತ್ತು ಇನ್ನಿತರ ಮಹತ್ತ್ವದ ಸ್ಥಾನಮಾನಗಳನ್ನು ಪಡೆಯಬೇಕಾದರೆ ಕುಲನಿಷ್ಠ ವರ್ಗಗಳ ಅಥವಾ ಇನ್ನಿತರ ಯಾವುದೇ ಸಾಮಾಜಿಕ ಸಮೂಹದ ಆಧಾರದ ಅಗತ್ಯ ಇರುವುದಿಲ್ಲ. ಥೈಲೆಂಡಿನಂಥ ದೇಶದಲ್ಲಿ ಬೌದ್ಧರು ಇನ್ನಿತರ ಅಲ್ಪಸಂಖ್ಯಾತ ಕುಲನಿಷ್ಠ ವರ್ಗಗಳನ್ನು ತಮ್ಮಲ್ಲಿ ಕೂಡಿಸಿಕೊಂಡು ಬಾಳುವುದನ್ನು ಚೆನ್ನಾಗಿ ಕಲಿತಿದ್ದಾರೆ.

ವಿಭಿನ್ನ ಧರ್ಮಗಳನ್ನು ಅನುಸರಿಸುತ್ತಿರುವ ಜನಸಮೂಹಗಳು ಒಂದೇ ಮಾನವಕುಲ ಮತ್ತು ಸಾಂಸ್ಕøತಿಕ ವಿಭಾಗಕ್ಕೆ ಸೇರಿದವರಾಗಿದ್ದರೆ ಇಂಥಾ ಸಂಯುಕ್ತ ಸಂಘವನ್ನು ಹೊಂದಿದ ಸರ್ಕಾರ ಕೆಲವೊಂದು ಸಲ ಘರ್ಷಣೆಗಳಿಗೆ ಎಡೆಮಾಡಿ ಕೊಡಬಹುದು. ಇಂಥ ಘರ್ಷಣೆಗಳು ವಿಭಿನ್ನ ಕುಲನಿಷ್ಠ ಸಮಾಜಗಳಿರುವಲ್ಲಿ ಸಾಮಾನ್ಯ.
ಒಂದೇ ರಾಜಕೀಯ ಆಡಳಿತಕ್ಕೆ ಒಳಪಡದೆ ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಮತ್ತು ರಕ್ತಸಂಬಂಧದಿಂದ ಒಂದಕ್ಕೊಂದು ಸಂಬಂಧವನ್ನಿಟ್ಟುಕೊಂಡಿರುವ ಕುಲನಿಷ್ಠ ಸಮಾಜಗಳ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಾದುದಿದೆ.

ಕೆಲವೊಂದು ಸಲ ಕುಲನಿಷ್ಠ ವರ್ಗಗಳು ತಮ್ಮವೇ ಆದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಇಲ್ಲವೆ ರಾಜಕೀಯ ಪ್ರತ್ಯೇಕತೆಯನ್ನು ಎತ್ತಿ ತೋರಿಸುವಲ್ಲಿ ಪ್ರಸಿದ್ಧಿ ಪಡೆದಿವೆ. ಇಂಥ ಪ್ರತ್ಯೇಕತೆಯನ್ನು ತೋರಿಸುವಲ್ಲಿ ಅವು ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಸಹ ತೋರಿಸುತ್ತವೆ.

ಐರೋಪ್ಯರು ಪೂರ್ವ ಆಫ್ರಿಕದಲ್ಲಿ ಆಡಳಿತವನ್ನು ಪ್ರಾರಂಭ ಮಾಡಿದಾಗ ಭಾರತದಿಂದ ವಲಸೆಗಾರರು ಬಂದು ಅಲ್ಲಿ ನೆಲೆಸಲಾರಂಭಿಸಿದರು. ಇವರು ಆಗಾಗಲೇ ಅಲ್ಲಿ ನೆಲೆಸಿದ್ದ ಆಫ್ರಿಕನರಿಗಿಂತ ಮತ್ತು ಅರಬ್ಬೀ ಜನರಿಗಿಂತ ಮಾನವ ಕುಲದಲ್ಲಿ ಮತ್ತು ಸಂಸ್ಕøತಿಯಲ್ಲಿ ಭಿನ್ನವಾಗಿದ್ದರು. ಆಗ ತಾನೆ ಬಂದ ಭಾರತೀಯರು ಮಧ್ಯಸ್ಥಗಾರರೆಂದೂ ನಿಪುಣ ಕೆಲಸಗಾರರೆಂದೂ ಗೊತ್ತಾದಾಗ ಉಳಿದ ಕುಲನಿಷ್ಠವರ್ಗಗಳಿಗೂ ಅವರಿಗೂ ಘರ್ಷಣೆ ಪ್ರಾರಂಭವಾಯಿತು. ಇಂಥಾ ಒಂದು ಘರ್ಷಣೆ ಕುಲನಿಷ್ಠ ವರ್ಗಗಳಲ್ಲಿ ಭಿನ್ನವಾದ ಸಂಸ್ಕøತಿ ಮತ್ತು ಪ್ರತ್ಯೇಕತೆಗಳನ್ನು ಉಳಿಸಿಕೊಂಡು ಬರುವಲ್ಲಿ ಸಹಾಯಕವಾಗಿದೆ.

ಸಂಪರ್ಕ ಸಾಧನಗಳು ಮತ್ತು ಪ್ರಮಾಣ ಸೌಕರ್ಯಗಳು ಹೆಚ್ಚಾದರೂ ವರ್ಗಗಳ ವೈಶಿಷ್ಟ್ಯ, ಮತ್ತು ಪ್ರತ್ಯೇಕತಾ ಮನೋಭವಗಳು ಕಡಿಮೆಯಾಗವು. ಎಲ್ಲಿಯವರೆಗೆ ವಿವಿಧ ಸಾಮಾಜಿಕ ಸಮೂಹಗಳಲ್ಲಿ ತಮ್ಮ ವಿಭಿನ್ನ ಸಂಪ್ರದಾಯಗಳನ್ನೂ ಸಂಸ್ಕøತಿಯನ್ನೂ ಮಾನವಕುಲವನ್ನು ವಿಭಾಗಿಸುವ ಇನ್ನಿತರ ಅಂಶಗಳನ್ನೂ ಕಾಯ್ದುಕೊಳ್ಳಬೇಕೆಂಬ ಲವಲವಿಕೆ ಇರುತ್ತದೋ ಅಲ್ಲಿಯವರೆಗೂ ಇಂಥ ಕುಲನಿಷ್ಠ ವರ್ಗಗಳು ಇದ್ದೇ ಇರುತ್ತವೆ.

ಕೆಲವೊಂದು ಸಲ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಇಂಥ ಕುಲನಿಷ್ಠ ಸಮಾಜಗಳು ತಾವಾಗಿಯೇ ಉದ್ಭವಿಸಿ ಮುಂದುವರೆಯಲು ಪ್ರಯತ್ನಿಸಿದ್ದುದು ಇತಿಹಾಸದಲ್ಲಿ ಕಂಡುಬಂದಿದೆ. ಇವುಗಳ ತೀವ್ರತೆಯನ್ನು ಕಡಿಮೆಮಾಡಲು ಇರುವುದು ಒಂದೇ ದಾರಿ; ಪರಸ್ಪರ ಅನುಕರಣೆ, ಸಹನೆ, ಸಹಜೀವನ, ಉದಾರ ಮನೋಭಾವ-ಇವು ಬೆಳೆಯಬೇಕು.
(ನೋಡಿ- ಕುಲನಿಷ್ಠ-ಜನಸಮುದಾಯಗಳು)							
     (ಎನ್.ಕೆ.ಕೆ.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ